ಅತಿಸಾರ

ಹೊಟ್ಟೆಗೆ ತೆಗೆದುಕೊಂಡ ವಸ್ತುಗಳು ಕರುಳಿನ ಮೂಲಕ ಎಂದಿಗಿಂತಲೂ ಬೇಗನೆ ಹೆಚ್ಚಾಗಿ ಮೆತುವಾಗೋ ನೀರುನೀರಾಗೋ ಹೊರಬೀಳುವಿಕೆ. ಈ ಉಚ್ಚಾಟ (ಭೇದಿ) ರೋಗಗಳ ಲಕ್ಷಣವೇ ಹೊರತು ಇದೇ ರೋಗವಲ್ಲ. ಮೈಗೆ ಬೇಡದಿರುವ, ಒಗ್ಗದಿರುವ, ಕರುಳಿನ ಒಳಪೊರೆಗಳನ್ನು ಕೆರಳಿಸುವ ವಸ್ತುಗಳಿಂದ ಮೈಗಾಗುವ ಅಪಾಯ ತಪ್ಪಿಸಲು ನಿಸರ್ಗ ಬೇರೆ ಬೇರೆ ಕಾರಣಗಳಿಂದ, ಬೇಗನೆ ಹೊರದೂಡುವ ಉಪಾಯವಿದು. ಉಚ್ಚಾಟ ಬೇರೆಯಾಗಿ, ಇಲ್ಲವೇ ಬೇಸಗೆ ಕಾಲದಲ್ಲಿ ಹೆಚ್ಚಾಗುವ ಇತರ ಅಂಟುರೋಗಗಳೊಂದಿಗೆ ಕಾಣಿಸಿಕೊಳ್ಳಬಹುದು. 
	
ದೊಡ್ಡವರಲ್ಲೂ ಮಕ್ಕಳಲ್ಲೂ ಇದರ ಕಾರಣ ಹಲವಾರಿದೆ. ಹರೆಯದವರಲ್ಲಿನ ಕಾರಣಗಳು : ಆಹಾರ ವಿಷವೇರಿಕೆ, ಆಸಪಾಕ (ಸ್ಟ್ರೂ), ವಿಷಮಶೀತಜ್ವರ, ಕ್ಷಯ, ಕಾಲರ, ರಕ್ತಭೇದಿಗಳಂಥ ಅಂಟುರೋಗಗಳು. ಜೀವವಿಷದ ಬೇನೆಗಳು, ಜೀವಾತು ಕೊರೆ, ಜೀವಿರೋಧಕ ಮದ್ದುಗಳ ಕೊಡುಗೆ, ಹೆಗ್ಗರುಳುರಿತ (ಕೊಲೈಟಿಸ್), ಹಲಪಾದಿಬೇನೆ (ಪಾಲಿಪೋಸಿಸ್), ನೆಟ್ಟಗರುಳಿನಲ್ಲಿ ಸೇರುವ ಹರವಸ್ತುಗಳು, ಕರುಳಿನ ಪರಪಿಂಡಿ ಜೀವಿಗಳು, ಮನೋರೋಗಗಳು ಮುಂತಾದುವು. ಮಕ್ಕಳಲ್ಲೂ ಇವೆಲ್ಲ ಕಾರಣಗಳಿಂದಲೂ ಮತ್ತು ರೊಟೋವೈರಸ್‍ಸೊಂಕಿನಿಂದಲೂ ಉಚ್ಚಾಟ ಆಗಬಹುದು. ಅಲ್ಲದೆ, ಹಣ್ಣು ತರಕಾರಿಗಳ ಮಿತಿಗೆಟ್ಟ ಸೇವನೆಯಿಂದಾದ ಆಹಾರದ ವ್ಯತ್ಯಾಸಗಳು, ದಂಡಾಣುಜೀವಿಯ (ಬ್ಯಾಸಿಲರಿ) ಇಲ್ಲವೇ ಅಪೂರ್ವವಾಗಿ ಚಲ್ಕಣದ (ಅಮೀಬಿಕ್) ಆಮಶಂಕೆಗಳು, ಜಿಡ್ಡಿನ ಉಚ್ಚಾಟ (ಸೀಲಿಯಾಕ್ ಡಿಸೀಸ್), ಕರುಳಿನ ಒಲತೂರಿಕೆ (ಇಂಟಸ್‍ಸಸೆಪ್ಷನ್), ಹಲಪಾದಿ ಬೇನೆ ಇವು ಮಕ್ಕಳಲ್ಲೇ ಹೆಚ್ಚು. ಸರಕ್ಕನೆ ಮೈಯಲ್ಲಿನ ಬಹುಪಾಲು ನೀರು ಉಚ್ಚಾಟದಿಂದ ಕಳೆದುಹೋದರೆ ಮಕ್ಕಳಲ್ಲೂ ವಯಸ್ಸಾದವರಲ್ಲೂ ತೀರ ಕಟ್ಟುನಿಟ್ಟು, ಅಪಾಯಕರ. ಏಕಾಣುಜೀವಿಗಳಿಂದಾದ ಉಚ್ಚಾಟಕ್ಕೆ ಸಲ್ಪ ಮದ್ದುಗಳು, ಹೆಚ್ಚು ಗುಣಕರ, ಅನಾರೋಗ್ಯ, ಸೊಂಕುಗಳ ನಿವಾರಣೆಯಲ್ಲಿ ಇದು ಬಲು ಮುಖ್ಯ. 
(ನೋಡಿ- ಆಮಶಂಕೆ) 
(ನೋಡಿ- ಜಠರ-ಕರುಳಿನ-ನಾಳ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ